ಭರಾವಣೆ ರಸೀದಿ -
	 ನಿರ್ದಿಷ್ಟ ಹಡಗಿನಲ್ಲಿ ಅಥವಾ ರೈಲುಬಂಡಿಯಲ್ಲಿ ತುಂಬಿದ ಸರಕನ್ನು ಗೊತ್ತಾದ ಹಾಗೂ ನಮೂದಿತ ಸ್ಥಾನಕ್ಕೆ ಮುಟ್ಟಿಸುವ ಜವಾಬ್ದಾರಿ ಒಪ್ಪಿಕೊಂಡ ಹಡಗಿನ ಒಡೆಯನಿಂದ ಇಲ್ಲವೇ ಅದರ ಯಜಮಾನನಿಂದ ಅಥವಾ ರೈಲು ಮುಂತಾದ ಸರಕು ಸಾಗಣೆ ವಾಹನಗಳ ಸಂಬಂಧಪಟ್ಟ ಅಧಿಕಾರಿಗಳಿಂದ ಸರಕಿನ ಮಾಲೀಕನಿಗೆ ಅಥವಾ ಸರಕನ್ನು ರವಾನಿಸುವವನಿಗೆ ಕೊಡುವ ತಪಶೀಲು ರಸೀದಿ (ಬಿಲ್ ಆಫ್ ಲೇಡಿಂಗ್). ಪ್ರಥಮವಾಗಿ ಅದು ಗೊತ್ತಾದ ಸರಕು ಹಡಗಿನೊಳಕ್ಕೆ ಬಂದಿರುವುದಕ್ಕೆ ರಸೀದಿ. ಎರಡನೆಯದಾಗಿ ಅದು ಸರಕಿನ ಒಡೆತನದ ಹಾಗೂ ಹಕ್ಕಿನ ಪ್ರತೀಕ. ಅನಂತರ ವರ್ಗಾವಣೆ ಸರಕಿನ ಸಾಂಕೇತಿಕ ವಶದ ಗುರುತು. ಮೂರನೆಯದಾಗಿ ಅದು ಸರಕಿನ ಸಾಗಣೆಯ ಸಂಬಂಧದಲ್ಲಿ ಆದ ಕರಾರಿನ ಲಿಖಿತ ದಾಖಲೆ. ಆದ್ದರಿಂದ ಸರಕಿನ ಸಾಗಣೆ ಹಡಗಿನಲ್ಲಿ ಆಗುತ್ತಿದ್ದಲ್ಲಿ ಭರಾವಣೆ ರಸೀದಿ ಏಕಕಾಲಕ್ಕೆ ಸರಕಿಗೆ ರಸೀದಿಯಾಗಿ, ಹಕ್ಕು ದಸ್ತಾವೇಜಾಗಿ ಹಾಗೂ ಸಾಗಣೆಯ ಕರಾರಾಗಿ ಪರಿಣಮಿಸುತ್ತದೆ. ಭರಾವಣೆ ರಸೀದಿಯಲ್ಲಿ ಸರಕನ್ನು ಹೇರಿರುವ ಹಡಗಿನ, ಹಡಗಿನ ಕಪ್ತಾನನ, ಸರಕನ್ನು ಯಾವ ಬಂದರಿನಲ್ಲಿ ಹೇರಲಾಗುತ್ತದೆಯೋ ಆ ಬಂದರಿನ ಮತ್ತು ಸರಕು ತಲುಪಬೇಕಾದ ಬಂದರಿನ ಹೆಸರುಗಳು ಸರಕಿನ ತಪಶೀಲು, ಸರಕು ಬಟವಾಡೆಯಾಗಬೇಕಾದ ಸ್ಥಳ, ಸರಕು ಪಡೆಯುವವರ ಹೆಸರು, ಸಾಗಣೆ ಬಾಡಿಗೆ ಹಣ, ಹೊರತುಪಡಿಸಿದ ಅಪಾಯಗಳು ಮತ್ತು ಹಡಗಿನ ಒಡೆಯನ ಹಕ್ಕು ಬಾದ್ಯತೆಗಳು ಮೊದಲಾದ ವಿವರಗಳನ್ನು ನಮೂದಿಸಲಾಗಿರುತ್ತದೆ ಮನುಷ್ಯನ ಕೈವಾಡವಿರದ ಘಟನೆಗಳು ಹಾಗು ಯುದ್ಧ ಮೊದಲಾದವು ಹಡಗಿನ ಒಡೆಯನ ಹೊಣೆಗೆ ಹೊರತಾಗುವ ಸರಕಿನ ನಾಶದ ಕಾರಣಗಳು. ಭರಾವಣೆ ರಸೀದಿ ಮೂಲಕ ಹಡಗಿನ ಒಡೆಯ ಸರಕು ಹಡಗಿನ ಮೇಲೆ ಬಂದಾಗ ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಅದನ್ನು ಗೊತ್ತುಪಡಿಸಿದ ಸ್ಥಾನಕ್ಕೆ ಒಯ್ದು ಮುಟ್ಟಿಸುವೆನೆಂಬ ಹೊಣೆ ಹೊರುತ್ತಾನೆ. ಹಡಗು ಸಮುದ್ರಯಾನಕ್ಕೆ ಯೋಗ್ಯವಿದೆ ಹಾಗು ಸಂಬಂಧಪಟ್ಟ ಸಿಬ್ಬಂದಿಯವರು ಸರಕಿನ ಬಗೆಗೆ ಪೂರ್ಣ ಜಾಗರೂಕತೆ ವಹಿಸುತ್ತಾರೆ ಎನ್ನುವ ಹಡಗಿನ ಒಡೆಯನ ಭರವಸೆಯ ಮೇಲೆ ನಂಬಿಕೆಯಿರುತ್ತದೆ.

ಭರಾವಣೆ ರಸೀದಿಗಳು ಸಾಮಾನ್ಯವಾಗಿ ಮೂರು ಪ್ರತಿಗಳಲ್ಲಿದ್ದು ಅದರಲ್ಲಿ ಹಡಗಿನ ಒಡೆಯನ ಪರವಾಗಿ ಹಡಗಿನ ಯಜಮಾನನ ಸಹಿಯಿರುತ್ತದೆ. ಯಜಮಾನನ ಹತ್ತಿರ ಒಂದು ಪ್ರತಿ ಇರುತ್ತದೆ. ಹಡಗಿನ ಅಧೀನ ಅಧಿಕಾರಿ ಸರಕು ಈಗಾಗಲೇ ಹಡಗಿನೊಳಕ್ಕೆ ಬಂದಿದ್ದಲ್ಲಿ ಅದನ್ನು ರವಾನಿಸುವವನಿಗೆ ಇನ್ನೆರಡು ಪ್ರತಿಗಳನ್ನು ಕೊಡುತ್ತಾನೆ. ಅವನು ಅವುಗಳಲ್ಲಿ ಒಂದನ್ನಿಟ್ಟುಕೊಂಡು ಇನ್ನೊಂದನ್ನು ಸರಕು ಪಡೆಯಬೇಕಾದವನಿಗೆ ಕಳುಹಿಸುತ್ತಾನೆ.

ಸಾಮಾನ್ಯ ಹಡಗಿನಲ್ಲಿ ಸರಕು ಸಾಗಣೆ ಆಗುತ್ತಿದ್ದಲ್ಲಿ ಹಡಗಿನ ಒಡೆಯನ ಅಭಿಕರ್ತನಂತೆ ಹಡಗಿನ ಯಜಮಾನ ತನಗೆ ಸರಿಕಂಡ ಷರತ್ತುಗಳ ಮೇಲೆ ಭರಾವಣೆ ರಸೀದಿಗೆ ಸಹಿ ಹಾಕುವ ಅಧಿಕಾರವಿರುತ್ತದೆ. ಹಡಗು ಬಾಡಿಗೆಗೆ ಹಿಡಿದದ್ದಾದಲ್ಲಿ ಯಜಮಾನ ಬಾಡಿಗೆಗೆ ಹಿಡಿದವನ ಅಭಿಕರ್ತನಂತೆ ಸರಕನ್ನು ರವಾನಿಸುವ ಬೇರೆ ಬೇರೆ ವ್ಯಕ್ತಿಗಳಿಗೆ ಭರಾವಣೆ ರಸೀದಗಳನ್ನು ಕೊಡಬಹುದು. ಸರಕಾಗಲೀ ಅದರ ಒಂದು ಭಾಗವಾಗಲೀ ಹಡಗನ್ನು ತಲುಪದೆ ಇದ್ದಾಗ್ಯೂ ಸರಕನ್ನು ಪಡೆಯುವವನಾಗಲೀ ಸರಕನ್ನು ಪ್ರತಿನಿಧಿಸುವ ಹೊಣೆಯುಳ್ಳ ಹಿಂಬರಹದಾರನಾಗಿರಲೀ ಭರಾವಣೆ ರಸೀದಿಯನ್ನು ಹೊಂದಿದ್ದರೆ ಅದು ಹಡಗಿನ ಯಜಮಾನನ ಇಲ್ಲವೇ ಭರಾವಣೆ ರಸೀದಿಗೆ ಸಹಿ ಹಾಕುವವನ ವಿರುದ್ಧ ನಿರ್ಣಾಯಕ ಸಾಕ್ಷಿಯಾಗುವುದೆಂದು 1856 ರ ಭರಾವಣೆ ರಸೀದಿ ಅಧಿನಿಯಮದ 3ನೆಯ ಪ್ರಕರಣ ಹೇಳುತ್ತದೆ. ಆದರೆ ಭರಾವಣೆ ರಸೀದಿ ಹೊಂದಿರುವವನಿಗೆ ಅದನ್ನು ಪಡೆದ ಕಾಲದಲ್ಲಿ ಸರಕು ಹಡಗನ್ನು ತಲುಪದಿದ್ದ ಸಂಬಂಧದಲ್ಲಿ ಪೂರ್ವ ಸೂಚನೆಯಿದ್ದಿತ್ತಾದರೆ ಇಲ್ಲವೆ ತಪ್ಪು ನಿರೂಪಣೆ ಸರಕನ್ನು ರವಾನಿಸುವವನ ಇಲ್ಲವೇ ಭರಾವಣೆ ರಸೀದಿ ಹೊಂದಿರುವವನು ಯಾರಿಂದ ಪಡೆದಿರುತ್ತಾನೋ ಅವನ ವಂಚನೆಯ ಮೂಲಕ ಆಗಿದ್ದರೆ ಈ ಪ್ರಕರಣ ಅನ್ವಯಿಸುವುದಿಲ್ಲ. ಕಾನೂನಿನನ್ವಯ ಹಡಗಿನ ಒಡೆಯ ಸರಕು ಸಾಗಣೆಯ ಸಂಬಂಧದಲ್ಲಿ ತಮಗಿಷ್ಟವಾದ ಹೊರತುಪಡಿಸಲಾದ ಅಪಾಯಗಳನ್ನು ಕರಾರಿನಲ್ಲಿ ಸೇರಿಸಬಹುದಾದರೂ ಅಮೆರಿಕಾದ 1893ರ ಅಧಿನಿಯಮದ ಪ್ರಕಾರ ಅವನು ತನ್ನ ನೌಕರರ ಅಲಕ್ಷ್ಯದಿಂದ ಉಂಟಾಗಬಹುದಾದ ಸರಕಿನ ಹಾನಿ ಇಲ್ಲವೇ ನಷ್ಟದ ಜವಾಬ್ದಾರಿ ಅಲ್ಲಗಳೆಯುವ ಷರತ್ತುನ್ನು ನಿಷೇಧಿಸುತ್ತದೆ.
ಭರಾವಣೆ ರಸೀದಿ ಮೇರೆ ಹಡಗಿನಲ್ಲಿ ಹೇರಲಾದ ಸರಕನ್ನು ಯಾವನೊಬ್ಬ ನಿರ್ದಿಷ್ಟ ವ್ಯಕ್ತಿಗಾಗಲೀ ಆದೇಶದಂತೆಯಾಗಲೀ ಇಲ್ಲವೇ ವರ್ಗಾವಣೆ ಪಡೆದವನಿಗಾಗಲಿ ತಲುಪುವಂತೆ ಮಾಡಬಹುದು. ಅಂಥ ಸಂದರ್ಭಗಳಲ್ಲಿ ಅವನು ಭರಾವಣೆ ರಸೀದಿಯ ಹಿಂಬರೆಹ ಮತ್ತು ಬಟವಾಡೆಯ ಮೂಲಕ ತನಗಿಷ್ಟವಾದವರಿಗೆ ಸರಕನ್ನು ವರ್ಗಾಯಿಸಬಹುದು. ಮತ್ತೆ ಹೆಸರಿನ ಜಾಗವನ್ನು ಖಾಲಿ ಇಟ್ಟು ಇಲ್ಲವೇ ವಾಹಕನಿಗೆ ಸರಕು ತಲಪುವಂತೆ ಮಾಡಿದಾದಲ್ಲಿ ಭರಾವಣೆ ರಸೀದಿ ಹೊಂದಿರುವವನಿಗೆ ಖಾಲಿ ಇದ್ದ ಜಾಗ ಭರ್ತಿಮಾಡಲು ಸ್ವಾತಂತ್ರ್ಯವಿರುತ್ತದೆ. ಆಗ ಕೇವಲ ಬಟವಾಡೆಯ ಮೂಲಕ ಭರಾವಣೆ ರಸೀದಿ ಹಸ್ತಾಂತರವಾಗಬಹುದು. ಭರಾವಣೆ ರಸೀದಿಯನ್ನು ವರ್ಗಾವಣೆಯ ಪತ್ರವೆಂದೇ ಭಾವಿಸಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆ. ವರ್ಗಾವಣೆಯ ಮೂಲಕ ಪಡೆದವನು ವರ್ಗಾವಣೆ ಮಾಡುವವನ ಹಕ್ಕಿನ ದೋಷಗಳಿಗೆ ಒಳಪಟ್ಟು ಅದನ್ನು ಪಡೆಯುತ್ತಾನೆ. ಅಂದರೆ ಭರಾವಣೆ ರಸೀದಿ ವರ್ಗಾವಣೆ ಪಡೆದವನು ಸದ್ಭಾವಪೂರ್ವಕ ಮತ್ತು ಸರಿಯಾದ ಮೌಲ್ಯಕ್ಕೆ ಪಡೆದಿದ್ದರೂ ವರ್ಗಾವಣೆ ಮಾಡಿದವನಿಗಿಂತ ಹೆಚ್ಚಿನ ಹಕ್ಕನ್ನು ಪಡೆಯಲಾರ. ಆದರೆ ಯೋಗ್ಯ ಕ್ರಮಾನುಸಾರ ವರ್ಗಾವಣೆಯ ಪತ್ರವನ್ನು ಹೊಂದಿರುವವನು ವರ್ಗಾವಣೆ ಮಾಡುವವನಿಗಿಂತ ಹೆಚ್ಚಿನ ಹಕ್ಕನ್ನು ಪಡೆಯಲರ್ಹನಾಗುತ್ತಾನೆ.

	ಭರಾವಣೆ ರಸೀದಿ ಹೊಂದಿರುವವನು ಗೊತ್ತುಮಾಡಿದ ಬಾಡಿಗೆ ಹಣ ಹಾಗೂ ಅವಶ್ಯವಿದ್ದಲ್ಲಿ ವಿಲಂಬ ಶುಲ್ಕ ಮೊದಲಾದ ಬಾಕಿಗಳನ್ನು ಪಾವತಿ ಮಾಡಿದಾಗ ಹಡಗಿನ ಯಜಮಾನ ಸರಕನ್ನು ಅವನ ವಶಕ್ಕೆ ಕೊಡಲೇಬೇಕಾಗುತ್ತದೆ. ಭರಾವಣೆ ರಸೀದಿ ತಂಡದ ರೂಪದಲ್ಲಿದ್ದು ಅದರ ಬೇರೆ ಬೇರೆ ಭಾಗಗಳನ್ನು ಬೇರೆ ಬೇರೆಯವರಿಗೆ ಕೊಟ್ಟಿದ್ದರ ಮೊದಲನೆಯ ಮೌಲ್ಯ ಕೊಟ್ಟು ವರ್ಗಾವಣೆ ಪಡೆದವನು ಸರಕಿಗೆ ಬಾದ್ಯಸ್ಥನಾಗುತ್ತಾನೆ. ತಂಡದ ಭಾಗವಾಗಿರುವ ಭರಾವಣೆ ರಸೀದಿಯನ್ನು ಮೊದಲಿಗೆ ಹಾಜರು ಮಾಡಿದವನಿಗೆ ಹಡಗಿನ ಯಜಮಾನನ ಸದ್ಭಾವಪೂರ್ವಕ ಕೊಟ್ಟಿದ್ದಾದರೆ ಆ ವ್ಯಕ್ತಿ ಮೊದಲಿನ ವರ್ಗಾವಣೆದಾರನಲ್ಲವೆಂದು ಅನಂತರ ತಿಳಿದು ಬಂದಾಗ್ಯೂ ಹಡಗಿನ ಯಜಮಾನ ಜವಾಬ್ದಾರನಾಗುವುದಿಲ್ಲ. ಬಾಡಿಗೆ ಹಣ ಮತ್ತು ವಿಳಂಬ ಶುಲ್ಕವೇ ಮೊದಲಾದ ಬಾಕಿಗಳ ನಿಮಿತ್ತ ಹಡಗಿನ ಒಡೆಯನಿಗೆ ಸರಕಿನ ಮೇಲೆ ಧಾರಣಾಧಿಕಾರವಿರುತ್ತದೆ. ಆ ಅಧಿಕಾರವನ್ನು ಅವನು ಬಾಕಿಗಳು ಸಂದಾಯವಾಗುವವರೆಗೆ ಸರಕನ್ನು ತಡೆಹಿಡಿಯುವುದರ ಮೂಲಕ ಚಲಾಯಿಸಬಹುದು.
(ಜಿ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ